ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಗತ

Sri Ranganatha Swamy Temple, Srirangam

ಇತಿಹಾಸ

ಶ್ರೀರಂಗಂ ದೇಗುಲವು ಮಹಾವಿಷ್ಣು ದೇವರ ಎಂಟು ಉದ್ಭವ (ಸ್ವಯಂ ವ್ಯಕ್ತ) ಕ್ಷೇತ್ರಗಳಲ್ಲಿ ಒಂದು. ಇದನ್ನು ಮಹತ್ತರವಾದ 108 ಮಹಾವಿಷ್ಣು ದೇವಾಲಯಗಳ ಪೈಕಿ (ದಿವ್ಯದೇಗುಲಗಳು) ಮೊಟ್ಟಮೊದಲ, ಶ್ರೇಷ್ಠ ಮತ್ತು ಅತ್ಯಂತ ಮಹತ್ವದ ದೇವಾಲಯವೆಂದು ಪರಿಗಣಿಸಲಾಗಿದೆ. ಈ ಕ್ಷೇತ್ರವನ್ನು ತಿರುವರಂಗ ತಿರುಪತಿ, ಪೆರಿಯಕೋಯಿಲ್, ಭೂಲೋಕ ವೈಕುಂಠ, ಭೋಗಮಂಟಪ ಎಂಬ ಹೆಸರುಗಳಿಂಗಲೂ ಕರೆಯಲಾಗುತ್ತದೆ. ವೈಷ್ಣವ ಆಡುಭಾಷೆಯಲ್ಲಿ “ಕೋಯಿಲ್” ಎಂಬ ಪದವು ಈ ದೇವಾಲಯವನ್ನು ಮಾತ್ರವೇ ಸೂಚಿಸುತ್ತದೆ. ಈ ಕ್ಷೇತ್ರವು ವಿಸ್ತಾರವಾದುದಾಗಿದೆ. ದೇವಾಲಯ ಸಂಕೀರ್ಣವು 156 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಇದರಲ್ಲಿ 7 ಪ್ರಾಕಾರಗಳಿವೆ. ಗರ್ಭಗುಡಿಯ ಸುತ್ತ ನಿರ್ಮಿಸಲಾಗಿರುವ ಬೃಹತ್ತಾದ ಮತ್ತು ದಪ್ಪವಾದ ಗೋಡೆಗಳಿಂದ ನಿರ್ಮಿಸಲಾಗಿದೆ. ಎಲ್ಲ ಪ್ರಾಕಾರಗಳಲ್ಲೂ 21 ಅತ್ಯದ್ಭುತವಾದ ಗೋಪುರಗಳಿದ್ದು, ಸಂದರ್ಶಿಸುವ ಯಾವುದೇ ವ್ಯಕ್ತಿಗೆ ವಿಶಿಷ್ಟವಾದ ನೋಟವನ್ನು ಒದಗಿಸುತ್ತವೆ. ಕಾವೇರಿ ಮತ್ತು ಕೊಲೆರೂನ್ ಅವಳಿ ನದಿಗಳು ರಚಿಸಿರುವ ಪರ್ಯಾಯ ದ್ವೀಪವೇ ಈ ಶ್ರೀರಂಗನ ನೆಲೆ.

ಶ್ರೀರಂಗಂನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವು ಸಾವಿರಾರು ವರ್ಷಗಳಿಗೂ ಹಳೆಯದಾದ ಸಾಮ್ರಾಜ್ಯವೊಂದರ ಐತಿಹಾಸಿಕ ಗತವೈಭವವನ್ನು ಹಾಗೂ ಮಹಾನ್ ನಾಗರಿಕತೆಯನ್ನು ಸಾರುವಂತಿದೆ. ಪಲ್ಲವ ವಂಶದ ಆಡಳಿತವು ದಕ್ಷಿಣ ಭಾರತದಲ್ಲಿ ಧಾರ್ಮಿಕ ವಿಸ್ತರಣೆಗೆ ನೀಡಿದ ಪ್ರೋತ್ಸಾಹವು ಆರ್ಯ ಸಂಸ್ಕೃತಿಗೆ ಕಾವೇರಿ ನದಿ ತೀರದಲ್ಲಿ ಘನವಾದ ಧಾರ್ಮಿಕ ತಳಹದಿಯನ್ನು ಹಾಕಿಕೊಟ್ಟಿತು ಎಂದು ಹೇಳಬಹುದು. ಚೋಳವಂಶದ ಅರಸರು ಕೋರಮಂಡಲ ತೀರವನ್ನು ಹಾಗೂ ಪೂರ್ವ ದಕ್ಕನ್‌ನ ಹೆಚ್ಚಿನ ಭಾಗಗಳನ್ನು ಸುಮಾರು ಮುನ್ನೂರು ವರ್ಷಗಳ ಕಾಲ ಆಳಿದರಲ್ಲದೇ ಹಿಂದೂ ಸಂಸ್ಕೃತಿಯ ಏಳಿಗೆಗೂ ಮಹತ್ತರವಾದ ಕೊಡುಗೆಯನ್ನು ಸಲ್ಲಿಸಿದರು.

history

ಚೋಳರು ಹದಿಮೂರನೇ ಶತಮಾನದಲ್ಲಿ ಮಧುರೈನ ಪಾಂಡ್ಯರಿಂದಲೂ ಹಾಗೂ ಮೈಸೂರಿನ ಹೊಯ್ಸಳರಿಂದಲೂ ಸೋಲುಂಡರು. ಹೊಯ್ಸಳರು ಶಿಲಾಶಾಸನಗಳು ಹಾಗೂ ಕಟ್ಟಡಗಳನ್ನು ಹಾಗೇ ಬಿಟ್ಟು ದೇವಾಲಯದ ನಿರ್ಮಾಣದಲ್ಲಿ ನಿರ್ದಿಷ್ಟವಾಗಿ ವಿಶೇಷವಾದ ಆಸಕ್ತಿಯನ್ನು ವಹಿಸಿದರು. ಹದಿನಾಲ್ಕನೇ ಶತಮಾನದ ಆದಿಭಾಗದಲ್ಲಿ ಹೊಯ್ಸಳರನ್ನು ಪಾಂಡ್ಯರು ಇಲ್ಲಿಂದ ಹಿಮ್ಮೆಟ್ಟಿಸಿದರು. ನಂತರ ಮುಸಲ್ಮಾನರು ದಕ್ಷಿಣ ಭಾರತದ ಮೇಲೆ ಸತತ ದಾಳಿ ಕೈಗೊಂಡರಾದರೂ 1336ರಲ್ಲಿ ವಿಜಯನಗರದಲ್ಲಿ ಸ್ಥಾಪನೆಗೊಂಡ ಹಿಂದೂ ಸಾಮ್ರಾಜ್ಯದಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಸಾಮ್ರಾಜ್ಯವು 1565ರ ವರೆಗೂ ಅಸ್ತಿತ್ವದಲ್ಲಿ ಉಳಿದಿತ್ತು.

ಈ ಸಮಯದಲ್ಲಿ ಯುರೋಪಿಯನ್ನರು ದಕ್ಷಿಣ ಭಾರತಕ್ಕೆ ತಮ್ಮ ಹೆಜ್ಜೆಯಿಟ್ಟರು. ಹದಿನಾರನೇ ಶತಮಾನದಲ್ಲಿ ಹಲವಾರು ವಿದೇಶಿ ಪ್ರವಾಸಿಗರು ಮತ್ತು ವ್ಯಾಪಾರಿಗಳು ಈ ಮಾರ್ಗದ ಮೂಲಕ ಹಾಯ್ದುಹೋದರಾದರೂ ವಿಜಯನಗರ ಸಾಮ್ರಾಜ್ಯಕ್ಕೆ ಇದು ಮಾರ್ಗವನ್ನು ಒದಗಿಸಿತ್ತು ಎಂಬ ಅಂಶವನ್ನು ಹೊರತುಪಡಿಸಿ ಬೇರಾವ ಆಸಕ್ತಿಕರ ಅಂಶವನ್ನೂ ದಾಖಲಿಸಲಿಲ್ಲ. 1600ರಲ್ಲಿ ಇಂಗ್ಲಿಷ್ ಈಸ್ಟ್‌ ಇಂಡಿಯಾ ಕಂಪನಿ ಹಾಗೂ 1664ರಲ್ಲಿ ಫ್ರೆಂಚ್ ಕಂಪನಿ ಸ್ಥಾಪನೆಗೊಂಡವು.

1680ರಲ್ಲಿ ಮೊಘಲ್ ದೊರೆ ಔರಂಗಝೇಬ್ (1658-1707) ಪಶ್ಚಿಮ ಡೆಕ್ಕನ್ ಮೇಲೆ ದಾಳಿ ಪ್ರಾರಂಭಿಸಿದನು. ದೀರ್ಘಕಾಲದ ಯುದ್ಧ ಹಾಗೂ ಮಹತ್ತರವಾದ ಹಾನಿಗಳೊಂದಿಗೆ ಬಿಜಾಪುರ ಹಾಗೂ ಗೋಲ್ಕಂಡದ ಕೋಟೆಗಳು ಆತನ ವಶವಾದವಾದರೂ ಆತ ವಿಧಿವಶನಾಗುವವರೆಗೂ ಈ ಯುದ್ಧಗಳು ಮುಂದುವರಿದವು.

ಯುರೋಪಿನಲ್ಲಿ ಆಸ್ಟ್ರಿಯಾದ ಪ್ರಭುತ್ವದ ಉತ್ತರಾಧಿಕಾರದ ಜಗಳವು ಇಂಗ್ಲಿಷರು ಹಾಗೂ ಫ್ರೆಂಚರನ್ನು ಕಾಲುಕೆರೆದು ಜಗಳವಾಡುವಂತೆ ಮಾಡಿತು. ಡೂಪ್ಲೆಕ್ಸ್ (1746ರಲ್ಲಿ) ಮದ್ರಾಸ್ ವಶಪಡಿಸಿಕೊಂಡನು ಹಾಗೂ ಅದನ್ನು ಎರಡು ವರ್ಷಗಳ ನಂತರ ಇಂಗ್ಲಿಷರಿಗೆ ಮರಳಿಸಲಾಯಿತು. 1752ರಲ್ಲಿ ಫ್ರೆಂಚರು ಶರಣಾಗತರಾಗಬೇಕಾಯಿತು ಮತ್ತು ಡೂಪ್ಲೆಕ್ಸ್ ನನ್ನು ಅಮಾನತುಗೊಳಿಸಲಾಯಿತು ಮತ್ತು 1754ರಲ್ಲಿ ವಾಪಸ್ ಕರೆಸಿಕೊಳ್ಳಲಾಯಿತು.

1760ರಲ್ಲಿ ಲಾಲಿ-ಟೋಲೆಂಡಾಲ್ ನೇತೃತ್ವದ ಮದ್ರಾಸ್ ವಶಪಡಿಸಿಕೊಳ್ಳುವ ಇನ್ನೊಂದು ಪ್ರಯತ್ನ ವಿಫಲವಾಯಿತು ಮತ್ತು ಫ್ರೆಂಚ್ ವ್ಯಾಪಾರ ಕೋಠಿಯನ್ನು 1763ರಲ್ಲಿ ಸ್ಥಗಿತಗೊಳಿಸಲಾಯಿತು. ಅಂದಿನಿಂದ ಇಂಗ್ಲಿಷ್ ಕಂಪನಿಯು ಇಡೀ ಭಾರತವನ್ನೇ ನಿಧಾನವಾಗಿ ತನ್ನ ವಶಕ್ಕೆ ತೆಗೆದುಕೊಂಡಿತು. ಫ್ರೆಂಚರು ಜಯದ ಸನಿಹಕ್ಕೆ ಬಂದಿದ್ದರೂ ಕೊನೆಯಲ್ಲಿ ಲಾರ್ಡ್‌ ವೆಲ್ಲೆಸ್ಲಿಯಿಂದ ಸೋಲಬೇಕಾಯಿತು ಮತ್ತು 1799ರಲ್ಲಿ ಶ್ರೀರಂಗಪಟ್ಟಣದ ಕೋಟೆಯನ್ನು ಆತ ಕೈವಶ ಮಾಡಿಕೊಂಡನು. ಇದಾದ ನಂತರ ಇಡೀ ದಕ್ಷಿಣ ಭಾರತವೇ ಇಂಗ್ಲೆಂಡಿನ ಪ್ರಭುತ್ವಕ್ಕೆ ಸಿಲುಕಿತು. ಕಾರ್ನಟಿಕ್ ಪ್ರಾಂತವು ಮದ್ರಾಸ್‌ ಸಂಸ್ಥಾನದ ಅಡಿಯಲ್ಲಿ ಬ್ರಿಟಿಷರ ವಶಕ್ಕೊಳಪಟ್ಟಿತು.